ಹಿಂಬಾಲಿಸಿ

ಶುಕ್ರವಾರ, ಮಾರ್ಚ್ 29, 2013

*ಚುನಾವಣೆ*


ಮತ್ತೆ ಬಂದಿದೆ
ಚುನಾವಣೆ,
ಕಳ್ಳರೊಳು
ಉತ್ತಮರನ್ನಾರಿಸುವ
ಮತದಾರರ ಬವಣೆ!!!

- ಸಂತೋಷ ನಾಯಕ್. ಎಸ್ 

ಸೋಮವಾರ, ಮಾರ್ಚ್ 25, 2013

*ಕೋಲಾ-ಹಲ*


ಅದು ಅದ್ಧೂರಿಯ
ಯುವ ಮೇಳ
ಬಂದವರಿಗೆಲ್ಲಾ
ಕಪ್ಪು-ಕೋಲ
ಕೊನೆಗೆ ಎಲ್ಲವೂ
ಕೋಲಾ-ಹಲ.
- ಸಂತೋಷ ನಾಯಕ್. ಎಸ್

ಭಾನುವಾರ, ಮಾರ್ಚ್ 24, 2013

*ನಾ-ನಲ್ಲ*


ನಲ್ಲೆ ಕೇಳು,
ನಲ್ಲ ನಲ್ಲೆಯರ ಬಗ್ಗೆ
ಬರೆಯುವವ
ನಾ-ನಲ್ಲ
- ಸಂತೋಷ ನಾಯಕ್. ಎಸ್

ಶನಿವಾರ, ಮಾರ್ಚ್ 23, 2013

*ಅರ್ಥ್-ಅವರ್*
ಇವತ್ತು ಅದೇನೋ
ಅರ್ಥ್-ಅವರ್ ಅಂತೆ
ಒಂದು ಗಂಟೆ ವಿದ್ಯುತ್
ಆರಿಸಬೇಕಂತೆ.
ನಮ್ಮೂರಾಗ
ತಲೆನೋವಿಲ್ಲ,ಮೆಸ್ಕಾಂ
ಪರಿಪಾಲಿಸುತ್ತೆ ಪ್ರತಿದಿನ
ಇದನ್ನ ಅರ್ಥ ವಿಲ್ಲದಂತೆ!!!   
   
- ಸಂತೋಷ ನಾಯಕ್. ಎಸ್ಶುಕ್ರವಾರ, ಮಾರ್ಚ್ 22, 2013

* ವಿಧಿ *


ವಿಧಿ ಬರೆದಿತ್ತು
ಕರಿ ಕಷ್ಟದ ಉಯಿಲು
ಮರುಭೂಮಿ ತುಂಬೆಲ್ಲಾ
ಸುಡುತ್ತಿತ್ತು ಬಿಸಿಲು
ದೂರದಿ ಕಂಡಿತು
ಮರವೊಂದರ ನೆರಳು
ಅಬ್ಬಾ! ಎಂದು
ಮರದಡಿಲಿ ಕೂರಲು
ಅಡಿಯಿಂದ ಕಾದಿತ್ತು
ಬಿಸಿಯೇರಿ ಮರಳು.   

- ಸಂತೋಷ ನಾಯಕ್. ಎಸ್

ಮಂಗಳವಾರ, ಮಾರ್ಚ್ 19, 2013

*ಪದ್ದತಿ*ಅಂದು ಹೀಗಿತ್ತು
ಪತಿ ಹೇಗೆ ಇರಲಿ
ಆತ ನಡೆದ ದಾರಿಯಲಿ
ಹೆಜ್ಜೆ ಇಡುವ ಪದ್ದತಿ,
ಇಂದು ಹಾಗಲ್ಲ
ದಾರಿ ಹಿಡಿಸದಿರೆ
ತಕ್ಷಣ ವಿವಾಹ ರದ್ದತಿ !!

- ಸಂತೋಷ ನಾಯಕ್. ಎಸ್

ಹಕ್ಕಿಯ ಹಾಡಿಗೆ, ಕೋಳಿಯ ಕೂಗಿಗೆ
ಎಚ್ಚೆತ್ತ ಕಂದಮ್ಮ, ಮನೆ ಬಾಗಿಲ೦ಗಲದಿ
ಬಿದ್ದಿರುವ ಮಂಜಿನಲಿ ಆಡುವ ಆಟದ
ಚೆ೦ದವ ನೋಡಲು, ಮೂಡಣದ ಕೆ೦ಪಿನಲಿ,
ವನಸಿರಿಯ ತ೦ಪಿನಲಿ, ಬಾಲಬ್ರಹ್ಮ ರೂಪದಲಿ
ಸ್ವರ್ಣರಥವನ್ನೇರುತ್ತಿದ್ದ ಸೂರ್ಯನ೦ದು.

ಅಲರಾಂ ಗಂಟೆಯನು ಬಾರಿ ಬಾರಿ ಸ್ಥಬ್ದಗೊಳಿಸಿ
ಕಿಂಡಿಯಿ೦ದ ಬಂದ ಕಿರಣ ಹಿಂದಿನಿದ ತಟ್ಟುತಿರಲು
ಮತ್ತೆ ಒಮ್ಮೆ ಎದ್ದು ಕೂತು, “ಯ್ಯಾ೦ಗ್ರಿ ಬರ್ಡ್” ಆಟವಾಡಿ
“ಸನ್ ರೈಸ್” ಕಾಫಿ ಹೀರುತಿರುವ ಕಂದನನ್ನು ಕಾಣುತಿರಲು,
ಬೇಸರದಿ ನೇಸರನು ಮೂಡುತಿರುವ ಕಾಲವಿ೦ದು.

ನಟ್ಟನಡುವ ಮಧ್ಯಾಹ್ನದಿ, ಜಗದಗಲದಾಗಸದಿ
ವಜ್ರದಂತೆ ಹೊಳೆವ ಸೂರ್ಯ, ತನ್ನ ಇನಿಯೆ
ವಸುಧೆ ಮೊಗದಿ, ಹರಿವ ಕೆರೆ ನದಿಗಳಲ್ಲಿ
ತನ್ನ ರುದ್ರ ರೂಪ ಕಂಡು, ಇನಿಯೆ ಮೇಲೆ ಕರುಣೆಗೊಂಡು
ಶಾಂತತೆಯತ್ತ ತಿರುಗುತಿದ್ದ ಸೂರ್ಯನ೦ದು.

ಕಟ್ಟಡದ ರಾಶಿ ರಾಶಿ ವಸುಧೆ ಮೊಗದಿ
ಮೊಡವೆಯ೦ತೆ ಬೆಳೆಯುತಿರಲು, ಇನಿಯೆ
ಮೊಗದಿ ತನ್ನ ಮೊಗವ ಕಾಣದಿರಲು,
ಕಾದು ಕಾದು ಕೊಪಗೊಗೊಂಡು,
ರಕ್ಷಾಕವಚ ಓಜೋನನ್ನು ಸಿಟ್ಟಿನಿಂದ
ಸುಟ್ಟಿಹನು ಸೂರ್ಯನಿ೦ದು.                

ಮುಗ್ದ ಜನರ ದಣಿವನರಿತು, ದಣಿದ ಜಗವ
ತಣಿಸಲೆಂದು, ನೀಲಮೆಘದಾಗಸದಿ, ಹೊನ್ಗಡಲ
ತೀರದಲಿ, ಜಗವ ಪೊರೆವ ಶ್ಯಾಮನ೦ತೆ
ಇರುಳ ತೇರನೆಳೆಯುತ್ತಿದ್ದ  ಸೂರ್ಯನಂದು.

ಮುಳುಗಲೆ೦ದು ಶಾಂತನಾಗಿ ದೂರ ಸರಿದ
ಸೂರ್ಯನನ್ನು, ಜಿಹ್ವೆಮೇಲೆ ಬಾಯಿ ಒಳಗೆ
ಬೆರಳಮೇಲೆ ಕಾಲ ಕೆಳಗೆ , ಅಲ್ಲಿ ಇಲ್ಲಿ ಎಲ್ಲೆಯಲ್ಲಿ
ನುಂಗುವಂಥ ಭ೦ಗಿಯಲ್ಲಿ ಚಿತ್ರ ತೆಗೆವ ಜನರ
ಜನರ ಕಂಡು, ಮರುಗಿ ಮರುಗಿ ಮುಳುಗುತಿಹನು
ಸೂರ್ಯನಿಂದು ..............................   

- ಸಂತೋಷ ನಾಯಕ್. ಎಸ್

ಸೋಮವಾರ, ಮಾರ್ಚ್ 18, 2013

ಹೀಗೆ ಸುಮ್ನೆ.....ಹೇಗೂ ಇಲಿವರೆಗೆ ಬಂದಿದ್ದೇನೆ , ಎರಡು ಕಿಲೋಮೀಟರ್ ಮು೦ದಕ್ಕೆ ಹೋದರೆ ಸಮುದ್ರ ತೀರಕ್ಕೆ ಹೋಗಿ ಸೂರ್ಯಾಸ್ತ ನೋಡಿ ಹೋಗಬಹುದು ಎ೦ದು ಹೆಜ್ಜೆಗಳನ್ನು ಎಣಿಸುವಷ್ಟರಲ್ಲಿ ಸಮುದ್ರ ತೀರ ಬಂದೇ ಬಿಟ್ಟಿತು. ಅಲ್ಲಲ್ಲಿ ಗು೦ಪು ಗು೦ಪಾಗಿದ್ದ ಜನ ಜ೦ಗುಲಿಯಲ್ಲಿ ನಾನು ಒ೦ಟಿಯಾಗಿ ಕೂತು, ನಿತ್ಯದ ಕರ್ಮ ಮುಗಿಸಿ ಸಾಗರ ತು೦ಬೆಲ್ಲ ಹೊನ್ನೀರು ಚೆಲ್ಲಿ ಅದೃಶ್ಯನಾಗುವ ತಯಾರಿಯಲ್ಲಿದ್ದ ಸೂರ್ಯನನ್ನೇ ನೋಡುತ್ತಿದೆ.

“ಸೂರ್ಯಾಸ್ತದ ಸಮಯದಲ್ಲಿ ಸಾಗರದ ಅಲೆಗಳು ನಮ್ಮ ಸಂದೇಶವನ್ನು ನಮಗೆ ಬೇಕಾದವರಿಗೆ ಕನಸಿನ ರೂಪದಲ್ಲಿ ತಲುಪಿಸುತ್ತವೆಯ೦ತೆ, ಮೋಡಗಳು ಹೊತ್ತು ತರುವ ಸ೦ದೇಶವನ್ನೂ ಹೇಗೆ ಮೇಘಸಂದೇಶ  ಎನ್ನುತ್ತಾರೆಯೋ, ಅ೦ತೆಯೆ ಇದನ್ನು ಸಾಗರ ಸಂದೇಶ ಎನ್ನುತ್ತಾರೆ ....” ಎ೦ದು ಹಿಂದಿನಿಂದ ಯಾರೋ ಮಹಾಜ್ಞಾನಿಯೋರ್ವರು ಹೇಳಿದ್ದು ಕೇಳಿಸಿತು. ಹೇಳಿದವರು ಯಾರು ಎ೦ಬುದನ್ನು ನೋಡದೆ, ಎದುರಲ್ಲಿ ಬರುತ್ತಿದ್ದ ಸಾಗರದ ಅಲೆಯ ಕಿವಿಯಲ್ಲಿ ಹೇಳಿಯೇ ಬಿಟ್ಟೆ “ಹೋಗಿ ನನ್ನ ಪ್ರಿಯೆಗೆ ಹೇಳು ನಾನು ಆಕೆಯನ್ನೂ ಪ್ರಾಣಕ್ಕಿಂತಲೂ ಹೆಚ್ಚು ಪ್ರೀತಿಸುತ್ತೇನೆ ಎಂದು”. ನನ್ನ ಸ೦ದೇಶವನ್ನು ಆಲಿಸಿದ ಅಲೆಯು, ಹೇಗೆ ಅಂಚೆಯಣ್ಣ ಚೀಲವನ್ನು ಹೆಗಲಿಗೇರಿಸಿ ಸೈಕಲ್ ಏರುತ್ತಾನೆಯೋ ಹಾಗೇ ಬಿಡುವಿಲ್ಲದೆ ನನ್ನ ಸ೦ದೇಶವನ್ನೂ ರಭಸದಲ್ಲಿ ಹೊತ್ತೊಯ್ಯಿತು.

ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ, ಅದೇ ಅಲೆಯು ಎಷ್ಟು ರಭಸದಲ್ಲಿ ಹೋಗಿತ್ತೋ ಅಷ್ಟೇ ರಭಸದಲ್ಲಿ ನನ್ನತ್ತ ಧಾವಿಸಿ ಬರುತ್ತಿತ್ತು. ಆ ಅಲೆಯಲ್ಲಿ ಗ೦ಭೀರತೆ ಇತ್ತು, ಮೇಲಾಗಿ ಕಾರುಣ್ಯ ತು೦ಬಿತ್ತು. ರಭಸದಲ್ಲಿ ಬ೦ದ ಅಲೆಯು ದಡಕ್ಕೆ ಅಪ್ಪಳಿಸಿ, ನನ್ನ ಕಿವಿಯ ನೇರಕ್ಕೆ ಹಾರಿ ನನಗೆ ಮರು ಸ೦ದೇಶವನ್ನು ಕೊಟ್ಟು, ಕರ್ತವ್ಯ ಮುಗಿಸಿ ರಭಸದಲ್ಲಿ ಸೈಕಲ್ ಏರಿ  ಮನೆಗೆ ಹೊರಟ ಅ೦ಚೆಯಣ್ಣನ೦ತೆ, ಹಿಂದಕ್ಕೆ ಓಡಿಹೋಯಿತು. ಅಷ್ಟಾದರೂ ಆ ಸಾಗರದ ಅಲೆಯು ನನಗೆ ಕೊಟ್ಟ ಮರು ಸ೦ದೇಶ ಏನು?????
.
.
.
.
.
.
.
.
.
.
.
.
.
.
“ನಿನ್ನ ಪ್ರಿಯೆ ಇಲ್ಲೇ ಪಕ್ಕದಲ್ಲಿ ಇನ್ನೊಬ್ಬನ ಜೊತೆಯಲ್ಲಿ ಕಡ್ಲೆಪುರಿ ತಿ೦ತಾ ಪಟ್ಟಾ೦ಗಾ ಹೊಡಿತಿದ್ದಾಳೆ, ನೀನೆ ಹೋಗಿ ನಿನ್ನ ಸ೦ದೆಶವನ್ನು ಹೇಳಿ ಬಾ......”

- ಸಂತೋಷ ನಾಯಕ್. ಎಸ್

ಶುಕ್ರವಾರ, ಮಾರ್ಚ್ 15, 2013

*ಆಣೆ *


ಆಕೆ ಕೇಳಿದಳು,
ಇದು ನಿನ್ನ
ಮೊದಲ ಪ್ರೇಮವೆ?
ಆತ ಜೋರಾಗಿ ಹೇಳಿದ,
“ಇದು ನನ್ನ ಮೊದಲ ಪ್ರೇಮ
ನಿನ್ನಾಣೆ", ಮೆಲ್ಲನೆ ಉದುಲಿದ
“ಬರೀ ನಿನ್ನೊಡನೆ..”
- ಸಂತೋಷ ನಾಯಕ್. ಎಸ್

ಮಂಗಳವಾರ, ಮಾರ್ಚ್ 12, 2013

*ಮತ್ಸರ*


ರಮೆಯೆ ನಿನ್ನ
ರಮಿಸಲೆ೦ದು
ಪ್ರೇಮಗೀತೆ
ಬರೆಯ ಹೊರಟೆ ,
ಮತ್ಸರದಿ ಲೇಖನಿಯು
ಶಾಯಿ ಕಕ್ಕಿತು..

ಪ್ರಯತ್ನ ಬಿಡಲಿಲ್ಲ..

ಹಾಡಿ ನಿನ್ನ
ರಮಿಸಲೆ೦ದು
ಮತ್ತೆ ಮತ್ತೆ
ಮನದಿ ನೆನೆದು
ಕಂಠಪಾಠ ಮಾಡಿಕೊಂಡೆ,
ಹಾಡಲೆಂದು ಬಾಯಿ ತೆರೆದೆ
ಧೂಳು ಗಾಳಿ ಕಸವು ಬಂದು
ಮತ್ಸರದಿ ಕೆಮ್ಮು ತ೦ದಿತು ....

- ಸಂತೋಷ ನಾಯಕ್. ಎಸ್ 


(ಐದನೇ ತರಗತಿಯಲ್ಲಿ ಮೋದ ಮೊದಲು ಇಂಗ್ಲೀಷು ಕಾಪಿ ಬರೆಯಲು ಖರೀದಿಸಿದ “ಬಡವರ ಕಡಿಮೆ ಬೆಲೆಯ ಶಾಯಿ ಪೆನ್ನು ಕಾಪಿ ಪುಸ್ತಕದ ಪುಟವನ್ನು  ಕೆಡಿಸಿದ ದಿನಗಳು ನೆನಪಿಗೆ ಬಂದಾಗ ಬರೆದ ಸಾಲುಗಳು ಮೊದಲ ಚರಣ.. ಎರಡನೇ ಚರಣ ಹೀಗೆ ಸುಮ್ಮನೆ..) 

ಸೋಮವಾರ, ಮಾರ್ಚ್ 11, 2013ಮೆಟ್ಟಬೇಡಿರಣ್ಣ  ಎನ್ನ
ತುಳಿಯದಿರಿ, ಮೆಟ್ಟಿ
ತುಳಿದು ಮನದ ನೋವಿಗೆ
ಮಯ್ಯ ನೋವ ಸೇರಿಸದಿರಿ

ನನ್ನವರ ಕೈತಪ್ಪಿ
ಬಿದ್ದಿಹೇನು ನಾನು, ಕಣ್ಣಿರುವ
ಕುರುಡರ೦ತೆನ್ನ ಮೆಟ್ಟಬೇಡಿ
  
ನನ್ನ೦ತೆ ಬಿದ್ದಿದ್ದ
ನನ್ನಣ್ಣ ಒ೦ದು ದಿನ,
ಜ೦ಗುಲಿಯ ಜಾತ್ರೆಯಲಿ
ಆತನೆತ್ತಿ ಕೊ೦ಡವರು
ಗೊತ್ತಿಲ್ಲ ಯಾರೆ೦ದು!!!

ಮೈ ಮನದ ನೋವಿನಲಿ
ಮರೆತ್ತಿದ್ದೆ ಪರಿಚಯಿಸಲು...
ನಾನು ಒ೦ದು ರುಪಾಯಿ..
ನನ್ನಣ್ಣ ನೂರು ರುಪಾಯಿ!!
   
- ಸಂತೋಷ ನಾಯಕ್. ಎಸ್ 

*ನಕ್ಕಳು*


ಆಕೆ
ನಕ್ಕಳು
ಮನೆಯ
ಹೊಕ್ಕಳು
ಮನೆಯಲ್ಲೀಗ
ಮೂರು ಮಕ್ಕಳು!!
 - ಸಂತೋಷ ನಾಯಕ್. ಎಸ್ 

ಶುಕ್ರವಾರ, ಮಾರ್ಚ್ 8, 2013

ಹನಿಗಳು
*ಹನಿಗಳು*

*ನಗದು*

ಕಿಸೆಯಲ್ಲಿ
ಇಲ್ಲದಿರೆ
ನಗದು,
ನನ್ನಾಕೆಯ
ತುಟಿಯೂ
ನಗದು!!

*ಮಹಿಳೆ*
ಸಹನೆ
ಶಾಂತಿ
ಕರುಣೆಯಿ೦ದ
ಕೂಡಿರುವ
ಮಹಾ ಇಳೆಯ
ಅನ್ವರ್ಥ ನಾಮ .

*ಕೃತಘ್ನ*
ಪ್ರಾಣವಿಲ್ಲದ
ಗಾಳಿ ಸೇವಿಸಿ
ಜೀವವಿಲ್ಲದ
ಜಲವ ಕುಡಿದು
ಗಾಳಿ ಜಲವ
ಮಲಿನ ಗೊಳಿಸುವ
ಮಾನವ.          * ಕವನ *

ನಾನೊಂದು ಕವನ ಬರೆದೆ

ಯಾಕೋ ಏನೋ ಹೊಳೆಯಲಿಲ್ಲ

ಕೊನೆಯ ಸಾಲು ಬರೆಯಲಿಲ್ಲ

ಕವನವೀಗ ನನ್ನದಲ್ಲ!!!

-      ಸ೦ತೋಷ ನಾಯಕ್. ಎಸ್

ಗುರುವಾರ, ಮಾರ್ಚ್ 7, 2013

ಗೂರ್ಖಗೂರ್ಖಮಡದಿ ಮಕ್ಕಳ

ಹರಿದ ಬಟ್ಟೆಯ

ಮನದಿ ನೆನೆದು,

ಗೂರ್ಖ,

ಬಟ್ಟೆ ಅ೦ಗಡಿಯ

ಬಾಗಿಲಲಿ

ಸ೦ಬಳದ
ಬಟ್ಟೆ ಕಾಯುತ್ತಿದ್ದ!!
  
- ಸಂತೋಷ ನಾಯಕ್. ಎಸ್ 

ಜೀವನದಲ್ಲಿ ಎಲ್ಲಾ
ಆಸೆಗಳನ್ನು ತ್ಯಜಿಸಿ ಬಾಳುವವನೇ ಸನ್ಯಾಸಿ.
ಆದರೆ,
ಆಸೆಗಳನ್ನು ತ್ಯಜಿಸಿ ಬಾಳಬೇಕು ಎ೦ಬುವುದೂ
ಒ೦ದು ಆಸೆ ಅಲ್ಲವೇ?!!!

-ಸ೦ತೋಷ ನಾಯಕ್ .ಎಸ್