ಹಿಂಬಾಲಿಸಿ

ಬುಧವಾರ, ಜನವರಿ 23, 2013

ಕೆಂಪು ಚೆಲುವೆ
*ಕೆಂಪು ಚೆಲುವೆ*

ಕಠಿಣ ಕಲ್ಲ ಬಂಡೆ ಮೇಲೆ 
ಬೆಳೆದ ಮುಳ್ಳ ಗಿಡದಿ,
ಅರಳಿ ನಿಂತ ಚೆಲುವ ಹೂವೆ;
ರವಿಯು ನಿನ್ನ ನೋಡುತಿರಲು
ನಾಚಿ ನಗುವ “ಕೆಂಪು ಚಲುವೆ”.

ಪುಷ್ಪಪಾತ್ರೆಯಿಂದ ಬಂದ ಮೊಗ್ಗೆ
ಬದುಕಿನೋಳೆಷ್ಟು ಆಯ್ಕೆ ನಿನಗೆ?
ಕದಲಿ ದಾರ ಬ೦ಧನದಿ ನಾರಿ ಮುಡಿಯ 
ಸೇರುವಾಯ್ಕೆ, ದ್ವಿಜರ ಮ೦ತ್ರ ಘೋಷದೊಳು 
ಹರಿಯ ಪಾದ ಸೇರುವಾಯ್ಕೆ, 
ಭ್ರಮರ ನಾದ ಲೀಲೆ ಕೇಳಿ ಸಂತಸದಿ ಬಾಳುವಾಯ್ಕೆ.

ಬದುಕ ಭ್ರಮಣೆಯಿಂದ ನಿನ್ನ 
ನೋಡಬಂದ ರಸಿಕನನ್ನು 
ಗಿಡದ ಮುಳ್ಳಿನಿಂದ ಚುಚ್ಚಿ,
ಎಸಲ ತುಟಿಯ ಒಳಗೆ ನಗುವೆ!!
ನೀನು ಮಹಾ “ಕೆಂಪು ಚಲುವೆ”!!

ಕಾಲ ಚಕ್ರ ಉರುಳುತಿರಲು 
ಎಸಳು ಎಸಳು ಉದುರುತಿರಲು,
ಸಮಯವಾಗ ಮೀರಿ ಇರಲು,
ಮುಳ್ಳ ನೋವ ತಿಂದ ರಸಿಕ 
ತನ್ನ ನೋವ ಗೀಚುತಿರಲು,
ನಿನ್ನ ಪರಿಗೆ ನೀ 
ನೊ೦ದರೆನು ಫಲ “ಕೆಂಪು ಚಲುವೆ”??

- ಸ೦ತೋಷ ನಾಯಕ್ ಎಸ್.

ಫೋಟೋ ಕೃಪೆ : ಶ್ರೀಪತಿ ಪಾಟ್ಕರ್