ಹಿಂಬಾಲಿಸಿ

ಸೋಮವಾರ, ಮಾರ್ಚ್ 18, 2013

ಹೀಗೆ ಸುಮ್ನೆ.....ಹೇಗೂ ಇಲಿವರೆಗೆ ಬಂದಿದ್ದೇನೆ , ಎರಡು ಕಿಲೋಮೀಟರ್ ಮು೦ದಕ್ಕೆ ಹೋದರೆ ಸಮುದ್ರ ತೀರಕ್ಕೆ ಹೋಗಿ ಸೂರ್ಯಾಸ್ತ ನೋಡಿ ಹೋಗಬಹುದು ಎ೦ದು ಹೆಜ್ಜೆಗಳನ್ನು ಎಣಿಸುವಷ್ಟರಲ್ಲಿ ಸಮುದ್ರ ತೀರ ಬಂದೇ ಬಿಟ್ಟಿತು. ಅಲ್ಲಲ್ಲಿ ಗು೦ಪು ಗು೦ಪಾಗಿದ್ದ ಜನ ಜ೦ಗುಲಿಯಲ್ಲಿ ನಾನು ಒ೦ಟಿಯಾಗಿ ಕೂತು, ನಿತ್ಯದ ಕರ್ಮ ಮುಗಿಸಿ ಸಾಗರ ತು೦ಬೆಲ್ಲ ಹೊನ್ನೀರು ಚೆಲ್ಲಿ ಅದೃಶ್ಯನಾಗುವ ತಯಾರಿಯಲ್ಲಿದ್ದ ಸೂರ್ಯನನ್ನೇ ನೋಡುತ್ತಿದೆ.

“ಸೂರ್ಯಾಸ್ತದ ಸಮಯದಲ್ಲಿ ಸಾಗರದ ಅಲೆಗಳು ನಮ್ಮ ಸಂದೇಶವನ್ನು ನಮಗೆ ಬೇಕಾದವರಿಗೆ ಕನಸಿನ ರೂಪದಲ್ಲಿ ತಲುಪಿಸುತ್ತವೆಯ೦ತೆ, ಮೋಡಗಳು ಹೊತ್ತು ತರುವ ಸ೦ದೇಶವನ್ನೂ ಹೇಗೆ ಮೇಘಸಂದೇಶ  ಎನ್ನುತ್ತಾರೆಯೋ, ಅ೦ತೆಯೆ ಇದನ್ನು ಸಾಗರ ಸಂದೇಶ ಎನ್ನುತ್ತಾರೆ ....” ಎ೦ದು ಹಿಂದಿನಿಂದ ಯಾರೋ ಮಹಾಜ್ಞಾನಿಯೋರ್ವರು ಹೇಳಿದ್ದು ಕೇಳಿಸಿತು. ಹೇಳಿದವರು ಯಾರು ಎ೦ಬುದನ್ನು ನೋಡದೆ, ಎದುರಲ್ಲಿ ಬರುತ್ತಿದ್ದ ಸಾಗರದ ಅಲೆಯ ಕಿವಿಯಲ್ಲಿ ಹೇಳಿಯೇ ಬಿಟ್ಟೆ “ಹೋಗಿ ನನ್ನ ಪ್ರಿಯೆಗೆ ಹೇಳು ನಾನು ಆಕೆಯನ್ನೂ ಪ್ರಾಣಕ್ಕಿಂತಲೂ ಹೆಚ್ಚು ಪ್ರೀತಿಸುತ್ತೇನೆ ಎಂದು”. ನನ್ನ ಸ೦ದೇಶವನ್ನು ಆಲಿಸಿದ ಅಲೆಯು, ಹೇಗೆ ಅಂಚೆಯಣ್ಣ ಚೀಲವನ್ನು ಹೆಗಲಿಗೇರಿಸಿ ಸೈಕಲ್ ಏರುತ್ತಾನೆಯೋ ಹಾಗೇ ಬಿಡುವಿಲ್ಲದೆ ನನ್ನ ಸ೦ದೇಶವನ್ನೂ ರಭಸದಲ್ಲಿ ಹೊತ್ತೊಯ್ಯಿತು.

ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ, ಅದೇ ಅಲೆಯು ಎಷ್ಟು ರಭಸದಲ್ಲಿ ಹೋಗಿತ್ತೋ ಅಷ್ಟೇ ರಭಸದಲ್ಲಿ ನನ್ನತ್ತ ಧಾವಿಸಿ ಬರುತ್ತಿತ್ತು. ಆ ಅಲೆಯಲ್ಲಿ ಗ೦ಭೀರತೆ ಇತ್ತು, ಮೇಲಾಗಿ ಕಾರುಣ್ಯ ತು೦ಬಿತ್ತು. ರಭಸದಲ್ಲಿ ಬ೦ದ ಅಲೆಯು ದಡಕ್ಕೆ ಅಪ್ಪಳಿಸಿ, ನನ್ನ ಕಿವಿಯ ನೇರಕ್ಕೆ ಹಾರಿ ನನಗೆ ಮರು ಸ೦ದೇಶವನ್ನು ಕೊಟ್ಟು, ಕರ್ತವ್ಯ ಮುಗಿಸಿ ರಭಸದಲ್ಲಿ ಸೈಕಲ್ ಏರಿ  ಮನೆಗೆ ಹೊರಟ ಅ೦ಚೆಯಣ್ಣನ೦ತೆ, ಹಿಂದಕ್ಕೆ ಓಡಿಹೋಯಿತು. ಅಷ್ಟಾದರೂ ಆ ಸಾಗರದ ಅಲೆಯು ನನಗೆ ಕೊಟ್ಟ ಮರು ಸ೦ದೇಶ ಏನು?????
.
.
.
.
.
.
.
.
.
.
.
.
.
.
“ನಿನ್ನ ಪ್ರಿಯೆ ಇಲ್ಲೇ ಪಕ್ಕದಲ್ಲಿ ಇನ್ನೊಬ್ಬನ ಜೊತೆಯಲ್ಲಿ ಕಡ್ಲೆಪುರಿ ತಿ೦ತಾ ಪಟ್ಟಾ೦ಗಾ ಹೊಡಿತಿದ್ದಾಳೆ, ನೀನೆ ಹೋಗಿ ನಿನ್ನ ಸ೦ದೆಶವನ್ನು ಹೇಳಿ ಬಾ......”

- ಸಂತೋಷ ನಾಯಕ್. ಎಸ್