ಹಿಂಬಾಲಿಸಿ

ಮಂಗಳವಾರ, ಮಾರ್ಚ್ 19, 2013


ಹಕ್ಕಿಯ ಹಾಡಿಗೆ, ಕೋಳಿಯ ಕೂಗಿಗೆ
ಎಚ್ಚೆತ್ತ ಕಂದಮ್ಮ, ಮನೆ ಬಾಗಿಲ೦ಗಲದಿ
ಬಿದ್ದಿರುವ ಮಂಜಿನಲಿ ಆಡುವ ಆಟದ
ಚೆ೦ದವ ನೋಡಲು, ಮೂಡಣದ ಕೆ೦ಪಿನಲಿ,
ವನಸಿರಿಯ ತ೦ಪಿನಲಿ, ಬಾಲಬ್ರಹ್ಮ ರೂಪದಲಿ
ಸ್ವರ್ಣರಥವನ್ನೇರುತ್ತಿದ್ದ ಸೂರ್ಯನ೦ದು.

ಅಲರಾಂ ಗಂಟೆಯನು ಬಾರಿ ಬಾರಿ ಸ್ಥಬ್ದಗೊಳಿಸಿ
ಕಿಂಡಿಯಿ೦ದ ಬಂದ ಕಿರಣ ಹಿಂದಿನಿದ ತಟ್ಟುತಿರಲು
ಮತ್ತೆ ಒಮ್ಮೆ ಎದ್ದು ಕೂತು, “ಯ್ಯಾ೦ಗ್ರಿ ಬರ್ಡ್” ಆಟವಾಡಿ
“ಸನ್ ರೈಸ್” ಕಾಫಿ ಹೀರುತಿರುವ ಕಂದನನ್ನು ಕಾಣುತಿರಲು,
ಬೇಸರದಿ ನೇಸರನು ಮೂಡುತಿರುವ ಕಾಲವಿ೦ದು.

ನಟ್ಟನಡುವ ಮಧ್ಯಾಹ್ನದಿ, ಜಗದಗಲದಾಗಸದಿ
ವಜ್ರದಂತೆ ಹೊಳೆವ ಸೂರ್ಯ, ತನ್ನ ಇನಿಯೆ
ವಸುಧೆ ಮೊಗದಿ, ಹರಿವ ಕೆರೆ ನದಿಗಳಲ್ಲಿ
ತನ್ನ ರುದ್ರ ರೂಪ ಕಂಡು, ಇನಿಯೆ ಮೇಲೆ ಕರುಣೆಗೊಂಡು
ಶಾಂತತೆಯತ್ತ ತಿರುಗುತಿದ್ದ ಸೂರ್ಯನ೦ದು.

ಕಟ್ಟಡದ ರಾಶಿ ರಾಶಿ ವಸುಧೆ ಮೊಗದಿ
ಮೊಡವೆಯ೦ತೆ ಬೆಳೆಯುತಿರಲು, ಇನಿಯೆ
ಮೊಗದಿ ತನ್ನ ಮೊಗವ ಕಾಣದಿರಲು,
ಕಾದು ಕಾದು ಕೊಪಗೊಗೊಂಡು,
ರಕ್ಷಾಕವಚ ಓಜೋನನ್ನು ಸಿಟ್ಟಿನಿಂದ
ಸುಟ್ಟಿಹನು ಸೂರ್ಯನಿ೦ದು.                

ಮುಗ್ದ ಜನರ ದಣಿವನರಿತು, ದಣಿದ ಜಗವ
ತಣಿಸಲೆಂದು, ನೀಲಮೆಘದಾಗಸದಿ, ಹೊನ್ಗಡಲ
ತೀರದಲಿ, ಜಗವ ಪೊರೆವ ಶ್ಯಾಮನ೦ತೆ
ಇರುಳ ತೇರನೆಳೆಯುತ್ತಿದ್ದ  ಸೂರ್ಯನಂದು.

ಮುಳುಗಲೆ೦ದು ಶಾಂತನಾಗಿ ದೂರ ಸರಿದ
ಸೂರ್ಯನನ್ನು, ಜಿಹ್ವೆಮೇಲೆ ಬಾಯಿ ಒಳಗೆ
ಬೆರಳಮೇಲೆ ಕಾಲ ಕೆಳಗೆ , ಅಲ್ಲಿ ಇಲ್ಲಿ ಎಲ್ಲೆಯಲ್ಲಿ
ನುಂಗುವಂಥ ಭ೦ಗಿಯಲ್ಲಿ ಚಿತ್ರ ತೆಗೆವ ಜನರ
ಜನರ ಕಂಡು, ಮರುಗಿ ಮರುಗಿ ಮುಳುಗುತಿಹನು
ಸೂರ್ಯನಿಂದು ..............................   

- ಸಂತೋಷ ನಾಯಕ್. ಎಸ್